ಗ್ರಾಟ್ಸ್-
ಆಸ್ಟ್ರೀಯ ದೇಶದ ಎರಡನೆಯ ದೊಡ್ಡ ನಗರ . ಸ್ಟಿರಿಯ ಒಕ್ಕೂಟ ರಾಜ್ಯದ ರಾಜಧಾನಿ. ವಿಯೆನ್ನದ ನೈಋತ್ಯಕ್ಕೆ 112 ಮೈ. ದೂರದಲ್ಲಿ, ಮೂರ್ ನದಿಯ ಎರಡೂ ದಂಡೆಗಳ ಮೇಲಿದೆ. ಜನಸಂಖ್ಯೆ 2,37,080 (1961) . ದಟ್ಟ ಕಾಡಿನಿಂದ ಕೂಡಿದ ಸ್ಟಿರಿಯನ್ ಆಲ್ಪ್ಸ್ ಶ್ರೇಣಿಯ ದಕ್ಷಿಣಕ್ಕೆ ಮೂರ್ ಕಣಿವೆಯ ಮುಖದ ಬಳಿ ಇರುವ ಈ ಪಟ್ಟಣದ್ದು ಮಹತ್ತ್ವದ ಸನ್ನಿವೇಶ. ಇದರ ಮುಂದೆ ವಿಶಾಲವೂ ಫಲವತ್ತೂ ಆದ ಗ್ರೇಸರ್‍ಫೆಲ್ಟ್ ಮೈದಾನ ಹಬ್ಬಿದೆ. ಪಟ್ಟಣದ ಉತ್ತಮ ಸ್ಥಳ ಷ್ಲಾಸ್‍ಬರ್ಗ್ (1552') . ಇದು ಸ್ಟಿರಿಯನ್ ಆಲ್ಟ್ಸ್‍ನ ಒಂದು ಹೊರ ಕವಲು. ಇಲ್ಲಿ ಹಲವು ಸುಂದರ ಉದ್ಯಾನವಗಳುಂಟು. ಷ್ಲಾಸ್‍ಬರ್ಗಿನ ದಕ್ಷಿಣ ಇಳಿಜಾರಿನಲ್ಲಿ 1561 ರಲ್ಲಿ ನಿರ್ಮಿತವಾದ ಒಂದು ಗಡಿಯಾರ ಗೋಪುರವೂ ಅದರ ಶಿಖರದ ಮೇಲೆ 1588 ರಲ್ಲಿ ಕಟ್ಟಲಾದ ಒಂದು ಘಂಟಾಗೋಪುರವೂ ಇವೆ. ಇದರ ಗಂಟೆಯ ತೂಕ 4 ಟನ್. ಷ್ಲಾಸ್‍ಬರ್ಗಿನ ಪಶ್ಚಿಮದಲ್ಲಿ ಮೂರ್ ನದಿಯೂ ಪೂರ್ವದಲ್ಲಿ ಉದ್ಯಾನವೂ ಇವೆ. ನಗರದಲ್ಲಿ ಇತಿಹಾಸ ಪ್ರಸಿದ್ಧವಾದ ಅನೇಕ ಕಟ್ಟಡಗಳಿವೆ. 16 ನೆಯ ಶತಮಾನದಲ್ಲಿ ಪುನರುಜ್ಜೀವನ ಶೈಲಿಯಲ್ಲಿ ಕಟ್ಟಲಾದ ಲ್ಯಾಂಡ್ ಹೌಸ್. 15 - 17 ನೆಯ ಶತಮಾನಗಳ ಆಯುಧ ಶಾಲೆ, ಜರ್ಮನ್ ಪುನರುಜ್ಜೀವನ ಶೈಲಿಯಲ್ಲಿ 19 ನೆಯ ಶತಮಾನದಲ್ಲಿ ಕಟ್ಟಲಾದ ಪುರಭವನ, 11 ನೆಯ ಶತಮಾನದಲ್ಲಿ ನಿರ್ಮಿಸಲಾದ, ಈಗ ಸರ್ಕಾರಿ ಕಚೇರಿಯಾಗಿರುವ, ಕೋಟೆಮನೆ , 15 ನೆಯ ಶತಮಾನದಲ್ಲಿ ಸೇಂಟ್ ಏಜೀಡಿಯಸ್ ಕಥೆಡ್ರಲ್ - ಇವು ಮುಖ್ಯವಾದವು. ಗ್ರಾಟ್ಸ್‍ನಲ್ಲಿ ಒಂದು ವಿಶ್ವವಿದ್ಯಾಲಯವೂ ಅನೇಕ ಶಾಲಾ ಕಾಲೇಜುಗಳೂ ಉಂಟು. ವಿಶ್ವವಿದ್ಯಾಲಯ 1586 ರಷ್ಟು ಹಳೆಯದು. ನಾಟ್ಯ ಶಾಲೆ, ಚಿತ್ರಶಾಲೆಗಳು ಇವೆ. 

ಗ್ರಾಟ್ಸ್ ನಗರ ವಿಯೆನ್ನ - ಮಾರಿಬೊರ್ ರೈಲು ಮಾರ್ಗದಲ್ಲಿ ಒಂದು ಮುಖ್ಯ ನಿಲ್ದಾಣ. ಇಲ್ಲಿಂದ ಯೂಗೊಸ್ಲಾವಿಯದ ಲ್ಯೂಬ್ಲಿಯಾನಾ, ಟ್ರಿಯೆಸ್ಟ್ ಮತ್ತು ಹಂಗರಿಯ ಸೋಂಬಾಟ್‍ಹೇಗಳಿಗೆ ರೈಲ್ವೆ ಸಂಪರ್ಕವುಂಟು. ವಿಮಾನ ನಿಲ್ದಾಣ ಇರುವುದು ಗ್ರಾಟ್ಸ್‍ನ ದಕ್ಷಿಣಕ್ಕೆ 5 ಮೈ. ದೂರದಲ್ಲಿ.

ಕಬ್ಬಿಣ - ಉಕ್ಕು, ಸೂಕ್ಷ್ಮ ಸಲಕರಣೆ, ಭಟ್ಟಿ, ಚರ್ಮ, ಕಾಗದ, ಬಟ್ಟೆ - ಇವು ಇಲ್ಲಿಯ ಮುಖ್ಯ ಉದ್ಯಮಗಳು. ರೈಲ್ವೇ ಕಾಯಾಗಾರಗಳು ಇವೆ. ಮಧ್ಯ ಹಣ್ಣು ಇವುಗಳಿಗೆ ವ್ಯಾಪಾರಕೇಂದ್ರ.

9 ನೆಯ ಶತಮಾನದಲ್ಲಿ ಬಹುಶಃ ಇಲ್ಲೊಂದು ಕೋಟೆಯಿತ್ತು. ಆ ಶತಮಾನದಲ್ಲಿ ಇದರ ಹೆಸರು ಮೊಟ್ಟಮೊದಲಿಗೆ ಕಾಣಬರುತ್ತದೆ. ಇದು ಪಟ್ಟಣದ ಹಕ್ಕು ಗಳಿಸಿದ್ದು 1240 ರಲ್ಲಿ.

ಇದು ಅನೇಕ ವರ್ಷಗಳ ಕಾಲ ಸ್ಟಿರಿಯದ ಕೇಂದ್ರವಾಗಿತ್ತು. 16 ನೆಯ ಶತಮಾನದಲ್ಲಿ ಇಲ್ಲಿ ಕೋಟೆಕೊತ್ತಲಗಳು ನಿರ್ಮಿತವಾದವು. ಪ್ರಸಿದ್ಧ ಜರ್ಮನ್ ಖಗೋಳ ಶಾಸ್ತ್ರಜ್ಞ ಯೋಹಾನ್ ಕೆಪ್ಲರ್ ಈ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ. ನೆಪೋಲಿಯಾನಿಕ್ ಯುದ್ಧಗಳ ಕಾಲದಲ್ಲಿ 1797 ಮತ್ತು 1805 ರಲ್ಲಿ ಗ್ರಾಟ್ ಫ್ರೆಂಚರಿಗೆ ವಶವಾಗಿತ್ತು. 19 ನೆಯ ಶತಮಾನದ ಈ ನಗರ ತುಂಬ ಬೆಳೆಯಿತು. ಇದಕ್ಕೆ ನಗರದ ಸ್ಥಾನ ಲಭ್ಯವಾದ್ದು 1850 ರಲ್ಲಿ.
(ಎಂ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ